Tuesday, March 5, 2013

ಈ ಮನ ನನ್ನದೇ!!!





ಪ್ರೇಮಿಗಳ ನಡುವೆ ಆಗಲಿ, ಸೋದರರ ನಡುವೆ, ಸ್ನೇಹಿತರ ನಡುವೆ ಅಥವಾ ತಾಯಿ ಮತ್ತು ಮಗುವಿನ ನಡುವೆಯೇ ಆಗಲಿ, ಪ್ರೀತಿ ಎಂಬೋದು ಬಹಳ ದೊಡ್ಡ ಶಬ್ದ, ಬಹಳ ಬಲಿಷ್ಠ ಸಂಬಂಧ. ಆದರೆ ಉಳಿದ ಬಾಂಧವ್ಯಗಳು ಸಮಯದೊಂದಿಗೆ ಬೆಳೆಯುವವಾದರೆ, ತಾಯಿ ಮಗುವಿನ ಬಾಂಧವ್ಯ ಹುಟ್ಟಿಗೂ ಮುಂಚಿನದು. ತಾಯಿ ನಮ್ಮನ್ನು ಹೊತ್ತು, ಹೆತ್ತು, ನಮ್ಮ ರಂಪ, ಕೋಪ, ರೇಗಾಟ, ತುಂಟಾಟವನ್ನೆಲ್ಲಾ ಸಹಿಸಿ ನಮ್ಮನ್ನು ಬೆಳೆಸುತ್ತಾಳೆ; ನಮ್ಮ ಸಂತಸದಲ್ಲಿ ನಗುತ್ತಾಳೆ, ನಮ್ಮ ದುಖಃದಲ್ಲಿ ಅಳುತ್ತಾಳೆ, ನಮ್ಮ ಶುಭಾಕಾಂಕ್ಷಿಗಳನ್ನು ಹೊತ್ತು ಮೆರೆದರೆ, ನಮ್ಮ ಕೆಡುಕು ಬಯಸುವವರ ಮೇಲೆ ಕೆಂಡ ಕಾರುತ್ತಾಳೆ; ನಾವು ತಪ್ಪು ಮಾಡಿದಾಗ ಸುಮತಿಯಾಗಿ ನಮ್ಮನ್ನು ತಿದ್ದುತ್ತಾಳೆ, ನಾವು ತಿದ್ದಿಕೊಳ್ಳದಿದ್ದಲ್ಲಿ ನಮ್ಮ ಮೇಲೆ ಸಿಡುಕುತ್ತಾಳೆ, ಆದರೆ ಅಂತರಾಳದಲ್ಲಿ ಆಕೆ ನಮಗಿಂತ ಹೆಚ್ಚು ನೋಯುತ್ತಾಳೆ. ಈ ಮಮಕಾರ ನಮ್ಮನ್ನು ಹೆತ್ತ ಅಮ್ಮಂದಿರಿಗೆ ಮಾತ್ರ ಸೀಮಿತವಲ್ಲ, ನೂರು ಕೋಟಿ ಮಕ್ಕಳನ್ನು ಸಂಭಾಳಿಸುತ್ತಿರುವ ಭಾರತ ಮಾತೆಗೂ ನಮ್ಮ ಮೇಲೆ ಇದೇ ಪ್ರೀತಿ. ಆದರೆ ಈಗಿನ ಜನರನ್ನು ನೋಡಿ, ತಾಯಿಯನ್ನು ಮನೆಯಿಂದ ಹೊರದಬ್ಬಿ ವೃದ್ಧಶ್ರಮಕ್ಕೆ ಸೇರಿಸುತ್ತಾರೆ, ಭಾರತ ಮಾತೆಯನ್ನು ತೊರೆದು ಪರದೇಶದ ಮುದ್ದಿನ ಮಕ್ಕಳಾಗುತ್ತಾರೆ.

ನಮ್ಮ ತಾಯಿ ಭಾರತ ಮಾತೆ ನಮಗೆ ಜನ್ಮ ಕೊಟ್ಟಳು,
ಅವಳ ಪುಣ್ಯ ನಮಗೆ ನೀಡಿ ನಿಜದಿ ಹರುಷ ಪಟ್ಟಳು.”
ಈ ಸಾಲುಗಳನ್ನು ಕೇಳಿದ ನೆನಪಿಂದು ಮರುಕಳಿಸುತ್ತಿದೆ. “ಜನ್ಮ ಸರಿ, ಆದರೆ ತನ್ನ ಪುಣ್ಯವನ್ನ ನಮಗೆ ನೀಡಿ ನಿಜದಿ ತಪ್ಪು ಮಾಡಿದಳು..” ಎಂಬ ಪದ ಬರೆವ ಮನಸಾಗಿದೆ.
ಬಹಳಷ್ಟು ದೂರುಗಳು ತಕರಾರುಗಳು ದಿನ ನಿತ್ಯ ಕೇಳಿಬರುವಂಥವು - “ಈ ದೇಶದಲ್ಲಿ ಏನಿದೆಯಪ್ಪಾ, ಬರೀ ಗೋಳು.” “ಈ ದೇಶದಲ್ಲಿ ಜನ ಸರಿ ಇಲ್ಲ “ಈ ದೇಶದಲ್ಲಿ ರಾಜಕಾರಣಿಗಳು ಬರೀ ತಿನ್ನೋದೇ “ಈ ದೇಶದಲ್ಲಿ ರಸ್ತೆಗಳು ಪೂರ್ತಿ ಹೊಂಡ, ಸಂಬಂಧಿಕರ ಕಾಟ “ಈ ದೇಶದಲ್ಲಿ ಅಪರಾಧ ಎಷ್ಟು ಜಾಸ್ತಿಯಾಗಿದೆಯಪ್ಪಾ ರಾಮ ರಾಮ!” ಮತ್ತು ಕೊನೆಗೆ, “ಯಾವಾಗ ಒಮ್ಮೆ ಯುಎಸ್, ಯೂಕೆ ಅಥವಾ ಅಟ್‍ಲೀಸ್ಟ್ ದುಬೈಗಾದ್ರೂ ಹೋಗ್ತಿನೋ ಅಂತ ಅನ್ನಿಸ್ತಾ ಇದೆ, ಬೇಡಪ್ಪ ಭಾರತ ನಂಗೆ!!!”

ಭಾರತವನ್ನ ದೂರೋ ಎಲ್ಲಾ ಭಾರತೀಯರಲ್ಲೂ ಕೇಳೊ ಆಸೆ- ಹುಟ್ಟಿ ಬೆಳೆದ ಈ ಭೂಮಿಯ ಬಗ್ಗೆ ಇಂಥ ತಿರಸ್ಕಾರ ಯಾಕೆ? ದೂರುಗಳ ಪಟ್ಟಿ ಮಾಡೋದು ಬಿಟ್ಟು, ಪಟ್ಟಿಯನ್ನ ಕಡಿಮೆಗೊಳಿಸೋ ಮನಸ್ಸಿಲ್ಲಾ ಯಾಕೆ? ದೂರದ ಬೆಟ್ಟ ನುಣ್ಣಗೆ ಅಂತಾರೆ, ಈ ಭಾರತ ಕೈಗೆಟುಕದಷ್ಟು ದೂರ ಆಗಿಲ್ಲ, ಅದಕ್ಕಾ! ಬಿಡಿ, ಅವರಿಗೆಲ್ಲಿ ಅರ್ಥ ಆಗತ್ತೆ. ಈ ಪುಟ್ಟ ಕವನ ಭಾರತದಿಂದ ದೂರ ಸರಿಯುವ ಮನಸಿರುವ ಭಾರತೀಯರಿಗಾಗಿ...


ಸಂತಸದಿ ಕುಣಿದಿದ್ದ ದಿನಗಳು, ಕ್ಷಣಗಳು ಈಗ ಈ ಮನಕೆ ನೆನಪಾಗದೇಕೆ!
ಒಲಿದ ಮನಗಳೊಡನೆ ಬಾಂಧವ್ಯ ಬೆಳೆಸಿದ್ದ ಆ ಸುಂದರ ಕ್ಷಣಗಳು ಮರೆತದ್ದು ಏಕೆ!
ನೆನಪಾದರೂ ಮನಕೆ ದೂರದ ಆ ಬೆಟ್ಟವೇ ನುಣ್ಣಗಿರುವಂತೆ ಕಾಣುವುದೇಕೆ!
ತಾಯಿಯಾಸರೆಯಿಂದ ತಬ್ಬಿಬ್ಬು ನಾನೆಂದು ದೂರುತಿಹ ಮನಸು- ಇದು ನನ್ನದೇ??
ತಾಯಿಯನು ತೊರೆದು ಮಲತಾಯಿಯೆಡೆ ತಿರುಗಿ ಕನಸಕಟ್ಟುವ ಮನಸು- ಇದು ನನ್ನದೇ???

ನಮ್ಮೂರ ಮಲ್ಲಿಗೆ ಸುವಾಸನೆ ಬೀರಿ ಸಂತಸಗೊಳಿಸಿದ್ದು ನೆನಪಾಗದೇಕೆ!
ಮನವ ಮುದಗೊಳಿಸಿದ ಹೂಬಳ್ಳಿಯಿಲ್ಲದ ಅಂಗಳದಿ ಪರದೇಶಿ ಗಿಡಗಳ ತೋರಿಕೆಯೇಕೆ!
ಆಸರೆಯ ನೀಡಿದ ಅಂಗಳದ ಹೂ ನಾನೇ ಎಂಬುದು ಕಣ್ಣಿದ್ದರೂ ನನಗೆ ಕಾಣದೇಕೆ!
ಪ್ರೀತಿಯೆಂಬ ಹೂವಿಗೆ ಬೇರೆ ಸಾಟಿಯಿಲ್ಲವೆಂಬುದು ಈ ಹುಚ್ಚು ಮನಸಿಗೆ ತಿಳಿಯದೇಕೆ!
ತಾಯಿಯ ಕಂಗಳ ಕಂಬನಿಯ ಕಡೆಗಾಣೊ ಮೂರ್ಖ ಮನಸು- ಇದು ನನ್ನದೇ??
ತಾಯಿಯನು ತೊರೆದು ಮಲತಾಯಿಯೆಡೆ ತಿರುಗಿ ಕನಸಕಟ್ಟುವ ಮನಸು- ಇದು ನನ್ನದೇ???


4 comments:

  1. chennagide, film writer agaodakke try madi...

    ReplyDelete
  2. raga jodisidre innu super :)
    olle bhava-geethe agboudu

    ReplyDelete
    Replies
    1. Ajit- raaga jodisi, nange raagada kaagunita gottilla :)

      Delete